ನಮ್ಮ ಬಗ್ಗೆ

ಕನ್ನಡ ಗ್ರಾಹಕರ ಕೂಟದ ಸಂಘಟನಾ ಶಕ್ತಿಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಜಾಗೃತ ಕನ್ನಡ ಗ್ರಾಹಕರಾಗಿ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಗರೀಕ ಸೇವೆ ಮತ್ತು ಗ್ರಾಹಕ ಸೇವೆಗಳು ಸಿಗಬೇಕೆಂಬ ನಿಲುವಿನೊಂದಿಗೆ ಕೆಲಸ ಮಾಡಿಕೊಂಡು ಬಂದಿದ್ದು, ಈವರೆಗೆ ಹಲವಾರು ಕಡೆಗಳಲ್ಲಿ ಕನ್ನಡದಲ್ಲಿ ನಾಗರೀಕ ಸೇವೆ ಮತ್ತು ಗ್ರಾಹಕ ಸೇವೆ ಸಿಗುವಂತೆ ಮಾಡಲು ಯಶಸ್ವಿಯಾಗಿದ್ದೇವೆ. ಜೊತೆಗೆ ಇನ್ನೂ ಅನೇಕ ಕಡೆಗಳಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗುವಂತೆ ಮಾಡಲು ನಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದೇವೆ.

ಕನ್ನಡ ಗ್ರಾಹಕರಾಗಿ ನಾವು ಮಾಡಿದ ಹಕ್ಕೊತ್ತಾಯದ ಪ್ರಯತ್ನಗಳು ಮತ್ತು ಕಂಡುಕೊಂಡ ಬದಲಾವಣೆಗಳು ಆದ ಪ್ರಮುಖ ಕ್ಷೇತ್ರಗಳೆಂದರೆ – ಸರ್ಕಾರಿ (ಕೇಂದ್ರ ಮತ್ತು ರಾಜ್ಯ ಸರ್ಕಾರಿ) ಸಂಸ್ಥೆಗಳಲ್ಲಿನ ಸಾರ್ವಜನಿಕ ಆಡಳಿತದ ವ್ಯಾಪ್ತಿಗೆ ಬರುವ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ., ಬೆಂಗಳೂರಿನ ಮೆಟ್ರೋ ರೈಲು, ಟ್ರಾಫಿಕ್ ಪೋಲೀಸ್ ವ್ವವಸ್ಥೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇತ್ಯಾದಿ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ವಿಮಾ ಕಂಪನಿಗಳು, ಮನರಂಜನಾ ಕ್ಷೇತ್ರಗಳಾದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು, ಖಾಸಗಿ ಟಿ.ವಿ. ಮತ್ತು ಎಫ್. ಎಂ. ವಾಹಿನಿಗಳು, ಬೆಂಗಳೂರಲ್ಲಿ ನಡೆಯುವ ಬೆಂಗಳೂರು ಹಬ್ಬ ಮತ್ತು ಗಣೇಶೋತ್ಸವಗಳು, ಟೆಲಿಕಾಂ ಸೇವೆ ನೀಡುವ ಮತ್ತು ಮೊಬೈಲ್ ಕಂಪನಿಗಳು, ನಗರಗಳಲ್ಲಿರುವ ದೊಡ್ಡ ರಿಟೇಲ್ ಮಾಲ್ ಗಳು, ಅಂಗಡಿ ಮುಂಗಟ್ಟುಗಳು, ಪ್ರವಾಸೋದ್ಯಮ ಸಂಸ್ಥೆಗಳು, ಹೋಟೆಲ್ಲುಗಳು, ದಿನಬಳಕೆ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಕರು ಮತ್ತು ಮಾರಾಟ ನಡೆಸುವ ಕಂಪನಿಗಳು, ಆರೋಗ್ಯ ಸಂಸ್ಥೆಗಳು, ಆಸ್ಪತ್ರೆಗಳು, ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳು, ಸಾರ್ವಜನಿಕವಾಗಿ ಪ್ರಕಟಿಸಲ್ಪಡುವ ಜಾಹಿರಾತುಗಳು, ನಾಮಫಲಕಗಳು ಮತ್ತು ಸೂಚನೆಗಳಿರುವ ಸ್ಥಳಗಳು, ಇತ್ಯಾದಿ.

ಮೇಲೆ ತಿಳಿಸಿದ ಎಲ್ಲ ಕ್ಷೇತ್ರಗಳಲ್ಲಿ ದಿನನಿತ್ಯದ ವ್ವವಹಾರದ ವೇಳೆ ಸಿಬ್ಬಂದಿ ಬಳಸುವ ಭಾಷೆ, ಪದಾರ್ಥಗಳ ಹೆಸರು, ಸಲಹೆ ಸೂಚನೆಗಳು, ನಾಗರೀಕ ಸಮಾಲೋಚನೆ, ಐ.ವಿ.ಆರ್. ಮೂಲಕ ನೀಡುವ ಗ್ರಾಹಕ ಸೇವೆ, ಮಾಹಿತಿ ವಿನಿಮಯ ಮಾಡುವ ಸಾಮಗ್ರಿಗಳು, ಅರ್ಜಿಗಳು, ರಷೀತಿಗಳು, ಪ್ರಕಟನೆಗಳು, ಮನರಂಜನೆ ಕಾರ್ಯಕ್ರಮಗಳಲ್ಲಿ ಬಳಸುವ ಭಾಷೆ, ಪ್ರದರ್ಶಿಸಲ್ಪಡುವ ಚಿತ್ರಗಳು, ಕಾರ್ಯಕ್ರಮಗಳು, ಅವುಗಳ ನಿರೂಪಣೆ – ಹೀಗೆ ಎಲ್ಲ ಸ್ಥರಗಳಲ್ಲಿ ಕನ್ನಡದ ಬಳಕೆಗಾಗಿ ಒತ್ತಾಯ, ಬಳಸಿದಾಗ ಪ್ರೋತ್ಸಾಹ, ಕನ್ನಡದಲ್ಲಿ ಸಿಗುತ್ತಿರುವ ಸೇವೆಗಳ ಸದ್ಬಳಕೆ, ತೊಡಕುಂಟಾದಾಗ ಅವುಗಳನ್ನು ನಿವಾರಿಸಲು ಕ್ರಮ, ದೂರು ನೀಡುವುದು, ಪ್ರತಿಭಟಿಸುವುದು, ಕಾನೂನು ಬದ್ಧ ಹೋರಾಟ ನಡೆಸುವುದು, ಇತ್ಯಾದಿ ಕೆಲಸಗಳನ್ನು ಮಾಡಲಾಗುತ್ತಿದೆ.