8ನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳ ಆಯ್ಕೆ ಮೊಬೈಲ್ ಗಳಲ್ಲಿ ಸಿಗಲಿ

micromaxinfo-262x300ಇತ್ತೀಚಿನ ಸುದ್ದಿಯ ಪ್ರಕಾರ ಟೆಲಿಕಾಂ ಡಿಪಾರ್ಟ್ಮೆಂಟ್ (Department of Telecom) ನವರು ಮುಂದಿನ ದಿನಗಳಲ್ಲಿ ಎಲ್ಲ ಮೊಬೈಲ್ ಗಳಲ್ಲೂ ಇಂಗ್ಲೀಷ್, ಹಿಂದಿ ಜೊತೆ ಒಂದು ಪ್ರಾದೇಶಿಕ ಭಾಷೆಯ ಆಯ್ಕೆ ಕೊಡುವಂತೆ ಕಡ್ಡಾಯ ಮಾಡುವ ಹೊಸ ನೀತಿ ಜಾರಿಗೆ ತರಲಿದ್ದಾರಂತೆ. ಸುದ್ದಿಯ ಕೊಂಡಿ ಇಲ್ಲಿದೆ.  ಈ ನಡೆಯ ಉದ್ದೇಶ ಹೆಚ್ಚು ಗ್ರಾಹಕರು ತಮ್ಮ ಭಾಷೆಯಲ್ಲೇ ವ್ಯವಹರಿಸುವಂತೆ ಇರಬೇಕು ಮತ್ತು ಸರ್ಕಾರದ ಎಲ್ಲ ಸೇವೆಗಳನ್ನು ತಮ್ಮ ಭಾಷೆಯಲ್ಲೇ ಪಡೆದುಕೊಳ್ಳುವಂತೆ ಆಗಬೇಕು ಎಂಬುದು.

 

ಮೇಲುನೋಟಕ್ಕೆ ಇದು  ಒಳ್ಳೆಯ ನಡೆಯಂತೆ ಕಂಡರೂ ಸ್ವಲ್ಪ ಒಳ ಹೊಕ್ಕಿ ನೋಡಿದಾಗ ಇಲ್ಲಿ ಕೇಂದ್ರ ಸರ್ಕಾರದ ನಡೆ ಕೇವಲ ಹಿಂದಿ ಭಾಷಿಕರಿಗೆ ಹೆಚ್ಚು ಮಾನ್ಯತೆ ಕೊಡುವುದು ಎದ್ದು ಕಾಣುತ್ತದೆ. ವಾಸ್ತವದಲ್ಲಿ ಎಲ್ಲ ಮೊಬೈಲ್ ಗಳಲ್ಲೂ ಈಗಾಗಲೇ ಇಂಗ್ಲಿಷ್ ಭಾಷೆಯ ಆಯ್ಕೆ ಇದ್ದೇ ಇರುತ್ತದೆ. ಜನರು ಅವರವರ ಭಾಷೆಯಲ್ಲೇ ಮೊಬೈಲ್ ಬಳಸಬೇಕು ಎನ್ನುವುದು ಸರಿಯಾದ ನಡೆಯಾದರೂ ಆ ನೀತಿಯನ್ನು ಸರಿಯಾದ ರೀತಿಯಲ್ಲಿ ರೂಪಿಸಬೇಕಿರುವುದು ಸರ್ಕಾರದ ಕರ್ತವ್ಯ . ಕನ್ನಡ, ತೆಲುಗು, ತಮಿಳು ಇತ್ಯಾದಿ ಭಾಷೆಗಳಂತೆ ಹಿಂದೀ ಕೂಡ ಹಿಂದೀ ರಾಜ್ಯಗಳ ಒಂದು ಪ್ರಾದೇಶಿಕ ಭಾಷೆ. ಸಂಪರ್ಕ ಹೆಚ್ಚಿಸಲು ಹೊಸ ನೀತಿ ಮಾಡುವಾಗ ಎಲ್ಲ ಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕಲ್ಲವೇ?

ಇಂಗ್ಲೀಷ್, ಹಿಂದೀ ಮತ್ತು ಒಂದು ಪ್ರಾದೇಶಿಕ ಭಾಷೆ ಎಂದು ಹೇಳುವ ಹಿಂದಿನ ಮರ್ಮವೇನು ? ಒಂದು ಪ್ರಾದೇಶಿಕ ಭಾಷೆ ಎಂದು ಹೇಳಿದಾಗ ಮೊಬೈಲ್ ಕಂಪನಿಗಳು ಯಾವ ಭಾಷೆಯ ಆಯ್ಕೆ ಮಾಡಬೇಕು? ಇಲ್ಲಿ ಬೇರೆ ಬೇರೆ ಭಾಷೆ ಮಾತಾಡುವ ಜನರಿದ್ದಾರಲ್ಲವೇ? ಹಿಂದಿ ಕೂಡ ಹಿಂದಿ ರಾಜ್ಯಗಳ ಪ್ರಾದೇಶಿಕ ಭಾಷೆ ಆಗಿರುವಾಗ ಹಿಂದಿಯ ಜೊತೆ ಒಂದು ಪ್ರಾದೇಶಿಕ ಭಾಷೆ ಎಂದು ಹೇಳುವ ಉದ್ದೇಶವಾದರೂ ಏನು?

ಕೇಂದ್ರ ಸರ್ಕಾರ ಹೊಸ  ನೀತಿ ತರುವುದೇ ಆದರೆ, ಮೊಬೈಲ್ ಗಳಲ್ಲಿ ನಮ್ಮ ಸಂವಿಧಾನದ 8 ನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳ ಆಯ್ಕೆ ಕೊಡಬೇಕು ಎಂಬ ನಿಯಮ ಮಾಡಬೇಕು ಅಥವಾ ಇಂಗ್ಲಿಷಿನ ಜೊತೆ ಆಯಾ ರಾಜ್ಯದ ಭಾಷೆಯ ಆಯ್ಕೆಯನ್ನು  ಕಡ್ಡಾಯವಾಗಿ ನೀಡಬೇಕು.

ಬಾಬು ಅಜಯ್

ಚಿತ್ರ ಮೂಲ : micromaxinfo.com