ವಿಶ್ವ ಗ್ರಾಹಕರ ದಿನದಂದು ಟ್ವಿಟರ್ ಚಳುವಳಿ

 

1962 ರ ಮಾರ್ಚ್ 15 ರಂದು ಜಾನ್ ಎಫ್ ಕೆನಡಿಯವರು ಅಮೇರಿಕಾದ ಸೆನೆಟ್ ನಲ್ಲಿ ಗ್ರಾಹಕ ಹಕ್ಕುಗಳನ್ನು ಕಾಪಾಡುವ ಬಗ್ಗೆ ಭಾಷಣ ನೀಡಿದ್ದರು. ಆ ಭಾಷಣದಲ್ಲಿ ಮುಖ್ಯವಾಗಿ ಗ್ರಾಹಕರಿಗೆ ಸಲ್ಲುವ ನಾಲ್ಕು ಹಕ್ಕುಗಳನ್ನು ಗುರುತಿಸಿದರು:

  • ಮಾಹಿತಿಯ ಹಕ್ಕು
  • ಸುರಕ್ಷತೆಯ ಹಕ್ಕು
  • ಆಯ್ಕೆಯ ಹಕ್ಕು ಮತ್ತು
  • ದೂರನ್ನ ನೀಡುವ ಹಕ್ಕು

ಮುಂದಿನ ದಿನಗಳಲ್ಲಿ ಈtweet-up-mar-15-kannada ನಾಲ್ಕು ಹಕ್ಕುಗಳನ್ನೇ ಆಧಾರವನ್ನಾಗಿಸಿಕೊಂಡು ಅಮೇರಿಕಾದಲ್ಲಿ (ಕನ್‍ಸ್ಯೂಮರ್ ಬಿಲ್ ಆಪ್ ರೈಟ್ಸ್) ಕಾನೂನು ರೂಪಿಸಲಾಯಿತು. ಇದರ ನೆನಪಿಗಾಗಿ  ಪ್ರತಿ ವರ್ಷ ಪ್ರಪಂಚದಾದ್ಯಂತ ಮಾರ್ಚ್ 15ರಂದು “ಗ್ರಾಹಕ ಹಕ್ಕುಗಳ ದಿನ”ವೆಂದು ಗುರುತಿಸಲಾಗಿದೆ.  ಬಹುಪಾಲು ಎಲ್ಲಾ ದೇಶದಲ್ಲೂ ಮೇಲೆ ತಿಳಿಸಿದ ಹಕ್ಕುಗಳನ್ನು ಆಧಾರವಾಗಿರಿಸಿಕೊಂಡು ಗ್ರಾಹಕ ಹಕ್ಕುಗಳ ಕಾಯಿದೆಯನ್ನು ರೂಪಿಸಲಾಗಿದೆ.

ಭಾರತದಲ್ಲಿ ಗ್ರಾಹಕ ಹಕ್ಕುಗಳನ್ನು ಎತ್ತಿಹಿಡಿಯಲು 1986 ರಲ್ಲಿ ಕಾಯಿದೆ ರೂಪಿಸಲಾಗಿದೆಯಾದರೂ ಬಹುಪಾಲು ಈ ಎಲ್ಲಾ ಕಾಯಿದೆಗಳಲ್ಲಿ ಗ್ರಾಹಕ ಭಾಷೆಯನ್ನು ಹಿಂದಿ/ಇಂಗ್ಲೀಶ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ಔಷಧಿ ಮತ್ತು ಆಹಾರ ಪದಾರ್ಥದಂತೆಯೇ ಯಾವುದಾದರೂ ವಸ್ತು ಕೊಂಡಾಗ ವಸ್ತುವಿನ ಜೊತೆಗೆ ನೀಡುವ ಬಳೆಕೆಯ ಸಹಾಯಕ ಮಾಹಿತಿ, ಸಹಾಯವಾಣಿಗಳು, ಜಾಹಿರಾತುಗಳು ಜನರ ಭಾಷೆಯಲ್ಲಿ ಇರಬೇಕೆನ್ನುವ ಪರಿಣಾಮಕಾರಿ ನಿಯಮವಿಲ್ಲದಿರುವುದು ಕಂಪನಿಗಳಿಗೆ ಇಂಗ್ಲೀಶ್/ಹಿಂದಿಯಲ್ಲಿ ಮಾಹಿತಿ ನೀಡಿದರೆ ಸಾಕು ಎನ್ನುವಂತಹಾ ನಿರ್ಧಾರಕ್ಕೆ ಬರುವಂತೆ ಮಾಡಿದೆ. ಭಾರತದಲ್ಲಿ ಇಂಗ್ಲೀಶ್/ಹಿಂದಿಯೇತರ ಗ್ರಾಹಕರು ತಮ್ಮ ನುಡಿಯಲ್ಲೇ ಎಲ್ಲಾ ಗ್ರಾಹಕ ಸೇವೆಗಳನ್ನು ಪಡೆಯುವುದರಿಂದ ವಂಚಿತರಾಗಿರುವುದರಿಂದ ಅವರಿಗೆ ಮಾಹಿತಿಯ ಹಕ್ಕನ್ನು ಕಸಿದುಕೊಂಡಂತಾಗಿದೆ.

ಭಾರತೀಯ ಗ್ರಾಹಕರಿಗೆ ತಮ್ಮ ನುಡಿಯಲ್ಲೇ ಎಲ್ಲಾ ಗ್ರಾಹಕ ಸೇವೆಗಳು ಸಿಗುವುದರ ಮಹತ್ವವನ್ನು ಸಾರಲು ವಿಶ್ವ ಗ್ರಾಹಕರ ದಿನದಂದು  ‘ಕನ್ನಡ ಗ್ರಾಹಕ ಕೂಟ’ವು ಟ್ವಿಟರ್ ಚಳುವಳಿಯೊಂದನ್ನು ರೂಪಿಸಿದೆ. ಈ ಟ್ವಿಟರ್ ಚಳುವಳಿಯಲ್ಲಿ ಭಾಗವಹಿಸಿ, ‎#ServeInMyLanguage ಎನ್ನುವ hashtag ಬಳಸಿ ಟ್ವೀಟ್ ಮಾಡುವ ಮೂಲಕ ಗ್ರಾಹಕ ಸೇವೆಯಲ್ಲಿ ಭಾಷಾ ಆಯಾಮದ ಪ್ರಾಮುಖ್ಯತೆಯನ್ನು ಸಾರೋಣ.

ಟ್ವಿಟರ್ ಚಳುವಳಿಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಇಲ್ಲಿ ತಿಳಿಸಿ.

ಟ್ವಿಟರ್ ಚಳುವಳಿಯ ವಿವರಗಳು:

ದಿನಾಂಕ : 15 ಮಾರ್ಚ್ 2016
ಸಮಯ : ಸಂಜೆ 4ರಿಂದ 8ರವರೆಗೆ
Hashtag: ‪ #‎ServeInMyLanguage

– ಅರುಣ್ ಜಾವಗಲ್