ಬ್ಯಾ೦ಗಲೋರ್ ಅಲ್ಲ ಬೆಂಗಳೂರು

ಕರ್ನಾಟಕದ ರಾಜಧಾನಿಯಾದ ಬೆಂಗಳೂರನ್ನು ಇಂಗ್ಲೀಷಿನಲ್ಲೂ Bengaluru ಅಂತಲೇ ಬರೆಯತಕ್ಕದ್ದು ಎನ್ನುತ್ತಾ ನಮ್ಮ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಎರಡು ವರುಷಗಳಾದರೂ ಇನ್ನೂ ನಮ್ಮೂರಿನ ಫಲಕಗಳಲ್ಲಿ, ಮಿಂಬಲೆ ತಾಣಗಳಲ್ಲಿ, ಸರ್ಕಾರಿ/ಖಾಸಗಿ ಪತ್ರ ವ್ಯವಹಾರಗಳಲ್ಲಿ ಹಲವೆಡೆ Bangalore ಅನ್ನುವ ಬಳಕೆಯನ್ನು ಕೆಲವು ಸಂಸ್ಥೆಗಳು ಹಾಗೆಯೇ ಉಳಿಸಿಕೊಂಡಿರುವುದನ್ನು

ನಾವು ಗಮನಿಸಬಹುದು. ಬೆಂಗಳೂರಿನ ಹೆಸರನ್ನು ಬರೆಯುವ ಬಗೆಯನ್ನು ಸರ್ಕಾರವೇ ಅಧಿಕೃತವಾಗಿ ತಿಳಿಸಿರುವಾಗ ಅದನ್ನು ಮೀರಿ ತಪ್ಪಾಗಿ ಬರೆಯುವುದು ಕಾನೂನಿನ ಉಲ್ಲಂಘನೆಯೇ ಸರಿ.
ಮದರಾಸು ಚೆನ್ನೈ ಆದಾಗ, ಕ್ಯಾಲ್ಕಟ ಕೋಲ್ಕತ್ತಾ ಆದಾಗ, ಬಾಂಬೆ ಮುಂಬೈ ಆದಾಗ ಯಾವ ರೀತಿಯಲ್ಲಿ ಅನುಷ್ಠಾನ ಸರಿಯಾಗಿ ಆಯಿತೋ, ಅದೇ ರೀತಿಯಲ್ಲಿ ಬೆಂಗಳೂರಿನ ವಿಷಯದಲ್ಲೂ ಆಗಬೇಕಿದೆ. ನಮ್ಮ ಊರಿನ ಹೆಸರನ್ನು ಯಾರು ತಪ್ಪಾಗಿ ಬರೆದಿರುತ್ತಾರೋ ಅವರನ್ನು ಪ್ರಶ್ನಿಸಿ, ನಮ್ಮೂರ ಹೆಸರನ್ನು ಸರಿ ಮಾಡುವಂತೆ ಕಿವಿ ಹಿಂಡಿ ಬುದ್ಧಿ ಹೇಳಬೇಕಿದೆ. ಆದರೆ ಇದು ಅಲ್ಲೊಮ್ಮೆ ಇಲ್ಲೊಮ್ಮೆ ಮಾಡಿ ಸುಮ್ಮನಾದರೆ ಆಗುವ ಕೆಲಸವಲ್ಲ.

“ಕನ್ನಡ ಗ್ರಾಹಕರ ಕೂಟ”ದಿಂದ ಈ ನಿಟ್ಟಿನಲ್ಲಿ ಅಭಿಯಾನವೊಂದು ಶುರುವಾಗಲಿದೆ. ಸರ್ಕಾರಿ/ಖಾಸಗಿ ಯಾವುದೇ ವಲಯವಾಗಲಿ, ಪತ್ರ ವ್ಯವಹಾರವಿರಲಿ, ಮುದ್ರಿತ ಜಾಹೀರಾತುಗಳಿರಲಿ, ನಾಮ ಫಲಕಗಳಿರಲಿ, ಮಿಂಬಲೆ ತಾಣಗಳಿರಲಿ, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಹೆಸರನ್ನ ಇಂಗ್ಲೀಷಿನಲ್ಲೂ Bengaluru ಅಂತಲೇ ಬರೆದಿರಬೇಕು. ಇಲ್ಲದಿದ್ದರೆ ಅದು ಸರ್ಕಾರದ ನಿಯಮದ ಉಲ್ಲಂಘನೆಯಾಗುವುದಾಗಿ ಸಂಬಂಧಪಟ್ಟ ಆಡಳಿತ ವರ್ಗಕ್ಕೆ ತಿಳಿಸೋಣ. ಒಂದೊಮ್ಮೆ ಅಷ್ಟಾದರೂ ಅವರು ತಿದ್ದಿಕೊಳ್ಳದಿದ್ದರೆ ಅಂತಹ ಸಂಸ್ಥೆಗಳ ಕುರಿತು ಸರ್ಕಾರಕ್ಕೆ ದೂರು ಸಲ್ಲಿಸೋಣ. ನಮ್ಮ ಬೆಂಗಳೂರು ಬೆಂಗಳೂರೇ ಹೊರೆತು ಬ್ಯಾ೦ಗಲೋರ್ ಅಲ್ಲ ಅನ್ನುವುದನ್ನ ಗಟ್ಟಿಯಾಗಿ ಹೇಳೋಣ.

bangalore-alla-bengaluru-engbangalore-alla-bengaluru-kan

ಚಿತ್ರ: ಸರ್ಕಾರದ ರಾಜಪತ್ರ