ಬ್ಯಾಂಕಲ್ಲಿ ಕನ್ನಡ ಮಾಯ: ವೃತ್ತಿಪರತೆಯ ಕೊರತೆ ಮತ್ತು ಗ್ರಾಹಕರ ಭಾಷಾ ಹಕ್ಕುಗಳು

ಬೆಂಗಳೂರಿನ ಐಸಿಐಸಿಐ ಬ್ಯಾಂಕಿನ ಶಾಖೆಯೊಂದರ ಸಿಬ್ಬಂದಿ ಗ್ರಾಹಕರೊಬ್ಬರಿಗೆ “ನೀವು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತಾಡಿ, ಕನ್ನಡ ಮಾತಾಡಬೇಡಿ” ಎಂದು ಹೇಳಿ ಅವಮಾನಿಸಿದ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಬ್ಯಾಂಕುಗಳ ಈ ಧೋರಣೆಯ ಬಗ್ಗೆ ಹಲವರು ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಸಿಐಸಿಐ ಬ್ಯಾಂಕಿನ ಪ್ರಕಾರ “ಕರ್ನಾಟಕದಲ್ಲಿ ಗ್ರಾಹಕರು ಕನ್ನಡದಲ್ಲಿ ಮಾತಾಡಬಾರದೇ? ಇವರ ಸಿಬ್ಬಂದಿಗೆ ಗೊತ್ತಿರುವ ಭಾಷೆಯನ್ನು ಗ್ರಾಹಕರು ಕಲಿತು ಬ್ಯಾಂಕಿಗೆ ಹೋಗಬೇಕೆ?” ಅನ್ನುವ ಸಹಜವಾದ ಪ್ರಶ್ನೆ ಇಂದು ಐಸಿಐಸಿಐನಲ್ಲಿ ಖಾತೆ ಹೊಂದಿರುವ ಮತ್ತು ಮುಂದಿನ ದಿನಗಳಲ್ಲಿ ಹೊಂದಬೇಕೆಂದಿರುವ ಎಲ್ಲಾ ಕನ್ನಡಿಗರನ್ನೂ ಕಾಡುತ್ತಿದೆ. ಈ ಪರಿಸ್ಥಿತಿ ಇರುವುದು ಕೇವಲ ಐಸಿಐಸಿಐ ಬ್ಯಾಂಕಲ್ಲಿ ಮಾತ್ರ ಅಲ್ಲ; ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಕನ್ನಡಿಗರಿಗೆ ಇದೇ ಪರಿಸ್ಥಿತಿ ಎದುರಾಗುತ್ತಿದೆ. RBI ನಿಯಮಗಳ ಪ್ರಕಾರ ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಸ್ಥಳೀಯ ಭಾಷೆಯಲ್ಲಿ ಸೇವೆಯನ್ನು ದೊರಕಿಸಬೇಕು. ಕರ್ನಾಟಕದಲ್ಲಿ ನೆಲೆಸಿರುವ ಯಾವುದೇ ಬ್ಯಾಂಕು ಕನ್ನಡದಲ್ಲಿ ಸೇವೆ ಕೊಡದಿರುವುದು RBI ನಿಯಮದ ಉಲ್ಲಂಘನೆಯೇ ಆಗಿರುತ್ತದೆ. ಆದರೂ ಕನ್ನಡದಲ್ಲಿ ಸೇವೆ ದೊರೆಯದಂತಹ ಘಟನೆಗಳು ಕರ್ನಾಟಕದ ಎಲ್ಲೆಡೆ ನಡೆಯುತ್ತಿದೆ. ಬ್ಯಾಂಕುಗಳ ಆಡಳಿತ ವರ್ಗಕ್ಕೆ ಕನ್ನಡಿಗರನ್ನು ಹೇಗೆ ನಡೆಸಿಕೊಂಡರೂ ಆಗುತ್ತದೆ ಅನ್ನುವ ಮನಸ್ಥಿತಿ ಮನೆಮಾಡಿರುವುದು ಕಾಣುತ್ತದೆ. ಬ್ಯಾಂಕ್ ಸಿಬ್ಬಂದಿಯಿಂದ ಈ ರೀತಿ ಅವಮಾನಕ್ಕೆ ಒಳಗಾದವರಲ್ಲಿ ಕೆಲವರು ಮಾತ್ರ ಇದರ ಬಗ್ಗೆ ದನಿಯೆತ್ತುತ್ತಿದ್ದು, ಉಳಿದವರು ಈ ನೋವನ್ನು ನುಂಗಿಕೊಂಡೇ ಸಾಗುತ್ತಿರುವುದು ಕಾಣುತ್ತಿದೆ. ಇಂತಹ ಪರಿಸ್ಥಿತಿ ಒದಗಿರಲು ಎರಡು ಮುಖ್ಯವಾದ ಕಾರಣಗಳಿವೆ : ಒಂದು, ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ ಗೊತ್ತಿಲ್ಲದವರನ್ನೂ ನೇಮಿಸಿಕೊಳ್ಳಲು ಅನುವು ಮಾಡಿಕೊಡುವ ಕೇಂದ್ರೀಕೃತ ಬ್ಯಾಂಕಿನ ನೇಮಕಾತಿಗಳು. ಎರಡನೆಯದು, ಕನ್ನಡ ಗ್ರಾಹಕರಿಗೆ ತಮ್ಮ ಭಾಷಾ ಹಕ್ಕುಗಳ ಕುರಿತ ಅರಿವೇ ಇಲ್ಲದಾಗಿರುವುದು.

ಕನ್ನಡ ಗ್ರಾಹಕರು ಬೆವರು ಸುರಿಸಿ ಗಳಿಸಿದ ಹಣವನ್ನು ಇವರ ಬ್ಯಾಂಕಲ್ಲಿ ಇಡುತ್ತಿರುವುದರಿಂದಲೇ ಅಲ್ಲವೇ ಇವರು ಕರ್ನಾಟಕದಲ್ಲಿ ಇಂತಹ ಲಾಭದ ಉದ್ಯಮ ನಡೆಸಲು ಆಗುತ್ತಿರುವುದು? ಹಣಕಾಸಿನ ವಿಷಯ ಅಂದಮೇಲೆ ಗ್ರಾಹಕರೊಂದಿಗೆ ನಂಬಿಕೆ, ಒಳ್ಳೆಯ ಸಂಬಂಧಗಳ ಪ್ರಶ್ನೆ ಬರುತ್ತದೆ. ಗ್ರಾಹಕರೊಂದಿಗೆ ಒಳ್ಳೆಯ ನಂಟನ್ನು ಬೆಸೆದುಕೊಳ್ಳಲು, ಅವರ ನಂಬಿಕೆಯನ್ನು ಗಳಿಸಲು, ಅವರಿಗೆ ಅನುಕೂಲಕರವಾಗಿ ನಡೆದುಕೊಳ್ಳುವ ಮೂಲಕ ಅವರ ಮನಸ್ಸನ್ನು ಗೆಲ್ಲುವುದರಲ್ಲಿ ಭಾಷೆಯ ಪಾತ್ರ ತುಂಬಾ ದೊಡ್ಡದು. ಆದರೆ ಹಣಕಾಸಿನ ಸೇವಾ ವಲಯಕ್ಕೆ ಸೇರುವ ಬ್ಯಾಂಕಿನವರು ತಮ್ಮ ಉದ್ಯಮದ ಲಾಭ-ನಷ್ಟದ ಲೆಕ್ಕಾಚಾಕಾರದ ಬಗ್ಗೆ ಕೊಡುವಷ್ಟು ಗಮನವನ್ನು ಗ್ರಾಹಕರ ಅನುಕೂಲದ ಕುರಿತು ಕೊಡದಿರುವುದು ಇವರ ಉದ್ದಿಮೆ ನಡೆಸುವ ರೀತಿಯಲ್ಲಿ ಇರುವ ಹುಳುಕನ್ನು ಎತ್ತಿ ತೋರುತ್ತದೆ. ಇದು ಬ್ಯಾಂಕಿನವರಲ್ಲಿ ಇರುವ ವೃತ್ತಿಪರತೆಯ ಕೊರತೆ ಅಂದರೂ ತಪ್ಪಿಲ್ಲ.

ಬ್ಯಾಂಕುಗಳಲ್ಲಿ ಅನಾನುಕೂಲ ಅನುಭವಿಸುತ್ತಿರುವ ಗ್ರಾಹಕರಿಗೆ ತಮ್ಮ ಭಾಷಾ ಹಕ್ಕುಗಳ ಕುರಿತು ಅರಿವೇ ಇಲ್ಲವಾಗಿದೆ. ಸರ್ಕಾರವಾಗಲಿ, ಅಥವಾ ಖಾಸಗಿ ಕಾಳಜಿ ಗುಂಪುಗಳಾಗಲಿ ಗ್ರಾಹಕರ ಭಾಷಾ ಹಕ್ಕುಗಳ ಬಗ್ಗೆ ಹೆಚ್ಚಾಗಿ ಹೇಳುವುದೇ ಇಲ್ಲ. ಬ್ಯಾಂಕಿನಲ್ಲಿ “ಹಣ ಪಡೆದುಕೊಂಡವರು ಕೌಂಟರ್ ಬಿಡುವ ಮುನ್ನ ಸರಿಯಾಗಿದೆಯೇ ಎಂದು ಎಣಿಸಿಕೊಳ್ಳಿ” ಎಂದು ಎಚ್ಚರಿಸುವ ಬ್ಯಾಂಕಿನವರು ಅದೇ ಗ್ರಾಹಕನ ಅಹವಾಲನ್ನು ಸ್ವೀಕರಿಸುವ ಸಿಬ್ಬಂದಿ ಆತನ ನುಡಿಯಲ್ಲೇ ವ್ಯವಹರಿಸಬೇಕು ಅನ್ನುವ ಕನಿಷ್ಠ ಪ್ರಜ್ಞೆಯನ್ನೂ ಗ್ರಾಹಕರಲ್ಲಿ ಹುಟ್ಟು ಹಾಕುವುದಿಲ್ಲ. ನಮ್ಮನ್ನು ಪ್ರತಿನಿಧಿಸುವ ಸರ್ಕಾರಗಳೂ ಈ ನಿಟ್ಟಿನಲ್ಲಿ ತುಟಿ ಬಿಚ್ಚುವುದಿಲ್ಲ. ಒಂದೆಡೆ ಕರ್ನಾಟಕದಲ್ಲಿ ಕನ್ನಡ ಗ್ರಾಹಕರ ಭಾಷಾ ಹಕ್ಕುಗಳ ರಕ್ಷಣೆಗೆ ಒತ್ತು ಕೊಡದ ರಾಜ್ಯ ಸರ್ಕಾರವಾದರೆ ಇನ್ನೊಂದೆಡೆ “ಕರ್ನಾಟಕದಲ್ಲಿ ಕನ್ನಡ ಬಳಸದಿದ್ದರೂ ಪರವಾಗಿಲ್ಲ, ಆದರೆ ಹಿಂದಿ ಬಳಕೆಯಲ್ಲಿ ಮುಂದಿದ್ದರೆ ಸಾಕು, ಬಹುಮಾನ ಕೊಡುತ್ತೇವೆ” ಅನ್ನುವ ಕೇಂದ್ರ ಸರ್ಕಾರ! ಇಂತಹ ಹುಳುಕು ನೀತಿಗಳನ್ನು ಪ್ರಶ್ನಿಸಬೇಕಾದ ಜನ ಪ್ರತಿನಿಧಿಗಳು ಮೌನವಾಗಿರುವುದರಿಂದ ಬ್ಯಾಂಕುಗಳು ತಮ್ಮ ಗ್ರಾಹಕರನ್ನು ಹೇಗೆ ಬೇಕೋ ಹಾಗೆ ನಡೆಸಿಕೊಳ್ಳಲು ಅನುವು ಮಾಡಿಕೊಟ್ಟಂತೆಯೇ ಆಗುತ್ತದೆ.

ಮೊದಲು ಸ್ವಾಯತ್ತವಾಗಿದ್ದ ಬ್ಯಾಂಕುಗಳು, ಕೇಂದ್ರ ಸರ್ಕಾರದ ಕೈಸೇರಿದ ಮೇಲೆ ನೇಮಕಾತಿಯಲ್ಲಿ ಆದ ಬದಲಾವಣೆಯಿಂದ ಭಾರತದ ಯಾವುದೇ ರಾಜ್ಯದವರು ಬೇರಾವುದೇ ರಾಜ್ಯದ ಬ್ಯಾಂಕಿನ ಶಾಖೆಯಲ್ಲಿ ಕೆಲಸ ಮಾಡಲು ದಾರಿ ಮಾಡಿಕೊಟ್ಟಿತು. ಕೇಂದ್ರೀಕೃತವಾದ ಈ ನೇಮಕಾತಿಯು ಗ್ರಾಹಕರ ಭಾಷೆಯ ಹಕ್ಕುಗಳಿಗೆ ಕುಂದು ತರುವಂತದ್ದಾಗಿದೆ. ಅದರಲ್ಲೂ ಬ್ಯಾಂಕಿನ ನೇಮಕಾತಿ ಪರೀಕ್ಷೆಗಳನ್ನು ಹಿಂದಿ-ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಸುವುದರಿಂದ ಬಹುತೇಕ ನೇಮಕಾತಿಗಳಲ್ಲಿ ಹಿಂದಿ ರಾಜ್ಯಗಳ ಜನರೇ ಆಯ್ಕೆಯಾಗಿ ಬರುವ ಸಾಧ್ಯತೆ ಇರುತ್ತದೆ. ಕನ್ನಡ ಕಲಿತರೆ ಮಾತ್ರ ಇವರಿಗೆ ಕರ್ನಾಟಕದಲ್ಲಿ ಕೆಲಸ ಮಾಡುವ ಅವಕಾಶ ನೀಡುವ ಹಾಗೆ ಯಾವುದೇ ಕಾನೂನು ಇಲ್ಲದಿರುವುದರಿಂದ ಕನ್ನಡವೇ ಬಾರದವರು ಕನ್ನಡಿಗರಿಗೆ ಸೇವೆ ಒದಗಿಸುವ ಕೆಲಸಗಳಲ್ಲಿ ಕೂರುವಂತಹ ವ್ಯವಸ್ಥೆ ರೂಪುಗೊಂಡಿದೆ. ಕರ್ನಾಟಕದ ಗ್ರಾಹಕರು ತಮಗಾಗುತ್ತಿರುವ ಅನಾನುಕೂಲದ ಬಗ್ಗೆ ದನಿಯೆತ್ತದೆ ಸಹಿಸಿಕೊಂಡಿರುವುದರಿಂದ ‘ಕರ್ನಾಟಕದಲ್ಲಿ ಕನ್ನಡ ಬಳಸದಿದ್ದರೂ ಉದ್ದಿಮೆ ನಡೆಸಿ ಗೆಲ್ಲುತ್ತೇವೆ’ ಅನ್ನುವ ಮನಸ್ಥಿತಿಯನ್ನು ಉದ್ದಿಮೆದಾರರು ರೂಢಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಇಂತಹ ಉದ್ದಿಮೆಗಳಿಗೆ ವೃತ್ತಿಪರತೆಯ ಪಾಠ ಕಲಿಸಬೇಕೆಂದರೆ ಅದು ಕೇವಲ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯಿಂದ ಮಾತ್ರವೇ ಸಾಧ್ಯ!

‘ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ಕೊಡದಿದ್ದರೆ ನಾವು ಕರ್ನಾಟಕದಲ್ಲಿ ಉದ್ಯಮ ನಡೆಸಲು ಆಗುವುದಿಲ್ಲ’ ಅನ್ನುವುದನ್ನು ಗ್ರಾಹಕರೇ ಉದ್ದಿಮೆದಾರರಿಗೆ ಮನವರಿಕೆ ಮಾಡಿಕೊಡಬೇಕು. ಕರ್ನಾಟಕದಲ್ಲಿರುವ ಎಲ್ಲಾ ಗ್ರಾಹಕರೂ ತಮ್ಮ ಭಾಷಾ ಹಕ್ಕುಗಳ ಕುರಿತು ಜಾಗೃತರಾಗಬೇಕು. ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವುದು ನಮ್ಮ ಹಕ್ಕು. ಎಟಿಎಂಗಳಲ್ಲಿ ಕನ್ನಡವಿಲ್ಲದಿದ್ದರೆ, ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ವ್ಯವಹಾರ ಮಾಡದಿದ್ದರೆ, ಬ್ಯಾಂಕ್ ಅರ್ಜಿಗಳು ಕನ್ನಡದಲ್ಲಿ ದೊರೆಯದಿದ್ದರೆ ಅದರ ಕುರಿತು RBIಗೆ ದೂರು ನೀಡುವ ಮೂಲಕ ಬ್ಯಾಂಕುಗಳನ್ನು ಎಚ್ಚರಿಸಬೇಕು. ಚುನಾಯಿತ ಪ್ರಜಾ ಪ್ರತಿನಿಧಿಗಳನ್ನು ನಮ್ಮ ಭಾಷಾ ಹಕ್ಕುಗಳನ್ನು ಕಾಪಾಡುವಂತೆ ಒತ್ತಾಯಿಸಬೇಕು. ಕರ್ನಾಟಕದಲ್ಲಿ ಕನ್ನಡವಷ್ಟೇ ಬಲ್ಲ ಹಾಗೂ ವ್ಯವಹಾರಕ್ಕೆ ಕನ್ನಡವೇ ಅನುಕೂಲವೆಂದು ನಂಬಿರುವ ಕರ್ನಾಟಕದ ಬಹುಸಂಖ್ಯಾತರ ದನಿಯು ಬ್ಯಾಂಕುಗಳ ಮೇಲಧಿಕಾರಿಗಳಿಗೆ, ಸರ್ಕಾರಗಳಿಗೆ ಮುಟ್ಟಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಅವಮಾನವಾಗುವ ಇಂತಹ ಘಟನೆಗಳನ್ನು ತಡೆಗಟ್ಟಬಹುದು.

– ವಲ್ಲೀಶ್ ಕುಮಾರ್ ಎಸ್