ಬುಕ್ ಮೈ ಶೋ ಮಿಂಚೆಗಳಲ್ಲಿ ಮಿಂಚಿದ ಕನ್ನಡ

ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪರಿಣಾಮವಾಗಿ ಹಲವಾರು ಕಡೆಗಳಲ್ಲಿ ಗ್ರಾಹಕ ಸೇವೆಗಳು ಕನ್ನಡಿಗರಿಗೆ ಕನ್ನಡದಲ್ಲೇ ದೊರೆಯುವಂತಾಗಿದೆ; ಇದಕ್ಕೆ ಮತ್ತೊಂದು ಸೇರ್ಪಡೆ ‘Book My Show'(BMS). ಸುಮಾರು ಒಂದು ವರ್ಷದ ಹಿಂದೆ ನೋಡಿದರೆ BMS ನಿಂದ ಬರುತ್ತಿದ್ದಂತ ಹೊಸ ಸಿನೆಮಾಗಳ ಕುರಿತ ಮಾಹಿತಿಯ ಮಿಂಚೆಗಳು ಕೇವಲ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಿಗೆ ಮಾತ್ರ ಸೀಮಿತವಾಗಿತ್ತು.

ಕನ್ನಡದ ಸಿನೆಮಾಗಳ ಬಗ್ಗೆ ಮಾಹಿತಿ ಕೊಡುತ್ತಿಲ್ಲದರ ಕುರಿತು ಹಲವರು BMS ಗೆ ಮಿಂಚೆಗಳನ್ನು ಬರೆದಿದ್ದೆವು. ಎಲ್ಲಾ ಕಡೆ ಆಗುವ ಹಾಗೆ ಮೊದಲು BMS ರವರ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬರಲಿಲ್ಲ. ಆದರೆ ಸತತವಾಗಿ ತುಂಬಾ ಜನ ಮಿಂಚೆಗಳನ್ನು ಬರೆದ ಪರಿಣಾಮ ಇಂಗ್ಲೀಷ್ ಹಾಗು ಹಿಂದಿ ಸಿನಿಮಾಗಳ ಜೊತೆ ಕನ್ನಡ ಸಿನಿಮಾಗಳ ಬಗ್ಗೆಯೂ ಮಿಂಚೆಗಳು ಬರಲು ಶುರುವಾಯಿತು. ಇದು ಕನ್ನಡ ಗ್ರಾಹಕರ ಒತ್ತಾಯಕ್ಕೆ ಸಿಕ್ಕ ಮೊದಲ ಹಂತದ ಜಯ ಅನ್ನಬಹುದು.

ಇದಾದಮೇಲೆ, ಕನ್ನಡ ಸಿನಿಮಾಗಳ ಕುರಿತ ಮಾಹಿತಿಯನ್ನು ಕನ್ನಡದಲ್ಲಿ ಕೊಡುವುದರಿಂದ ಹೆಚ್ಚಿನ ಜನರನ್ನು ತಲುಪಲು ಸಾಧ್ಯ ಎಂಬ ಸಲಹೆಯನ್ನು ನಾವು BMSಗೆ ನೀಡಿದೆವು. ಇದರ ಪರಿಣಾಮವಾಗಿ ಮೊದಲು ಕಂಗ್ಲಿಷ್ನಲ್ಲೂ, ನಂತರ ಪೂರ್ತಿ ಕನ್ನಡದಲ್ಲಿಯೂ ಕನ್ನಡ ಸಿನಿಮಾಗಳ ಕುರಿತ ಮಾಹಿತಿ ಮಿಂಚೆಗಳು BMS ಅವರಿಂದ ಬರಲಾರಂಭಿಸಿದವು.

ಮಿಂಚೆಗಳಲ್ಲಿ ಕನ್ನಡ ಸಿನಿಮಾದ ಮಾಹಿತಿ ಕನ್ನಡದಲ್ಲಿ ಕೊಡಿ ಎಂದು ಆಗ್ರಹಿಸಿದ ಪರಿಣಾಮ ಕನ್ನಡ ಮಾರುಕಟ್ಟೆಗೆ ಇರುವ ಬೇಡಿಕೆ ನೋಡಿ ಚಿತ್ರ ಮಂದಿರಗಳಲ್ಲಿನ ಅವರ ಜಾಹೀರಾತುಗಳು ಸಹ ಈಗ ಕನ್ನಡದಲ್ಲಿ ರಾರಾಜಿಸುತ್ತಿವೆ.

BMS ನವರು ಕನ್ನಡಿಗರಿಗೆ ಕನ್ನಡ ಚಿತ್ರಗಳ ಬಗ್ಗೆ ಕನ್ನಡದಲ್ಲೇ ಮಾಹಿತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರ ಜೊತೆಗೆ BMS ಅವರ ಕಾಲ್ ಸೆಂಟರ್ಗೆ ಕರೆ ಮಾಡಿದಾಗ IVRನಲ್ಲಿ ಕನ್ನಡದ ಆಯ್ಕೆಯಿಲ್ಲ; ಅಲ್ಲದೆ ಗ್ರಾಹಕ ಸೇವಾ ಸಿಬ್ಬಂದಿಗೆ ಕನ್ನಡವೇ ಗೊತ್ತಿಲ್ಲ ಅನ್ನುವುದು ಗಮನಕ್ಕೆ ಬಂದಿದೆ. BMS ಕಾಲ್ ಸೆಂಟರ್ಗೆ ಕರೆ ಮಾಡಿದಾಗ ಕನ್ನಡದಲ್ಲೇ ಸೇವೆ ಪಡೆಯುವ ಆಯ್ಕೆ ಇರಬೇಕೆಂದೂ, ಕನ್ನಡ ಮಾತನಾಡಬಲ್ಲ ಸೇವಾ ಸಿಬ್ಬಂದಿಯನ್ನು ನೇಮಿಸಬೇಕೆಂದು ಹೇಳುತ್ತಾ ಎಲ್ಲರೂ ಮಿಂಚೆಗಳನ್ನು ಬರೆಯೋಣ.
ಅವರ ಮಿಂಚೆ ವಿಳಾಸ: techdesk@bookmyshow.com

ಅವರ ವೆಬ್ಸೈಟಿನ ಮೂಲಕವೂ ಅವರಿಗೆ ನಿಮ್ಮ ಅನಿಸಿಕೆ ಸಲ್ಲಿಸಬಹುದು: https://in.bookmyshow.com/contactus.bms

21 4_320 3_320– ಅಜಯ್ ಎ ಕುಮಾರ್