ಝೀ ಸರಿಗಮಪ – ಹಿಂದಿ ಮಾತ್ರ ಏಕೆ?

ಕನ್ನಡದ ಝೀ ಸರಿಗಮಪ ಕಾರ್ಯಕ್ರಮದಲ್ಲಿ ಬಾಲಿವುಡ್ ಸುತ್ತನ್ನು ಹಾಕುವ ಮೂಲಕ ಹಿಂದಿ ಹಾಡುಗಳಿಗೆ ಝೀವಾಹಿನಿ ಮಣೆ ಹಾಕಿದೆ. ನಿಜಕ್ಕೂ ಇದರ ಉದ್ದೇಶವೇನು? ಝೀ ಕನ್ನಡ ನೋಡುವವರು ಕನ್ನಡಿಗರು. ಅವರು ಕನ್ನಡ ವಾಹಿನಿಯನ್ನು ನೋಡುವುದು ಕನ್ನಡ ಮನರಂಜನೆಗಾಗಿ. ಹೀಗಿರುವಾಗ ಇಲ್ಲಿ ಹಿಂದಿ ಮನರಂಜನೆಯನ್ನು ಹಾಕುವುದೇಕೆ? ಒಂದು ವೇಳೆ ಕಾರ್ಯಕ್ರಮದಲ್ಲಿ ವೈವಿಧ್ಯತೆಯನ್ನುಹೆಚ್ಚಿಸುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದರೆ, ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು, ಬಂಗಾಳಿ, ಅಸ್ಸಾಮಿ, ಮರಾಠಿ, ಹೀಗೆ ಎಲ್ಲಾ ಭಾಷೆಗಳಲ್ಲೂ ಹಾಡುವ ಅವಕಾಶ ನೀಡಬಹುದಿತ್ತು. ಆದರೆ ಕೇವಲ ಹಿಂದಿ ಒಂದಕ್ಕೇ ಸ್ಥಾನ ಕೊಟ್ಟಿರುವುದು ಸರಿಯಲ್ಲ. ಇಷ್ಟಕ್ಕೂ ಹಿಂದಿ ಭಾಷೆಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಕನ್ನಡ ಅಥವಾ ಬೇರಾವುದೇ ಹಿಂದಿಯೇತರ ಭಾಷೆಗಳ ಹಾಡನ್ನು ಹಾಡಲು ಅವಕಾಶ ಇದೆಯೇ? ಇಲ್ಲ. ಅಂದಮೇಲೆ ಕನ್ನಡ ವಾಹಿನಿಗಳು ಹಿಂದಿ ಹಾಡುಗಳನ್ನು ಏಕೆ ಹಾಡಿಸಬೇಕು?

ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಮಾತ್ರ ಹೆಚ್ಚುಗಾರಿಕೆ ಕೊಡುತ್ತಾ ಬಂದಿರುವುದನ್ನು ನಾವು ನೋಡುತ್ತಿದ್ದೇವೆ. ಇದರ ಗಾಳಿ ನಮ್ಮ ಕನ್ನಡದ ವಾಹಿನಿಗಳಿಗೂ ಬೀಸಿದಂತೆ ಕಾಣುತ್ತಿದೆ. ಕೇಂದ್ರ ಸರ್ಕಾರದ ಪ್ರಾಯೋಜಿತ ಅಸಮಾನತೆಯ ಭಾಷಾನೀತಿಯು ಹಿಂದಿ ಭಾಷೆಗೆ ಮಾತ್ರ ದೇಶದೆಲ್ಲೆಡೆ ಮಾರುಕಟ್ಟೆ ಕಟ್ಟಿಕೊಟ್ಟಿದೆ. ಈಗ ಕನ್ನಡದ ವಾಹಿನಿಗಳೂ ತಾವಾಗಿಯೇ ಹಿಂದಿ ಕಾರ್ಯಕ್ರಮಗಳನ್ನು ನೀಡುತ್ತಾ ಹೋದರೆ ಭಾಷಾ ಅಸಮಾನತೆಯನ್ನು ಪೋಷಿಸಿದಂತೆ ಆಗುತ್ತದೆ. ಹಿಂದಿ ಭಾಷೆಗೆ ಮಾತ್ರ ಹೆಚ್ಚುಗಾರಿಕೆ ಕೊಡುವ ರೀತಿ ಅಸಮಾನತೆಯಿಂದ ಕೂಡಿದ್ದು, ಎಲ್ಲಾಭಾಷೆಗಳಿಗೂ ಎಲ್ಲಾ ವಲಯಗಳಲ್ಲೂ ಸಮಾನ ಪರಿಗಣನೆ ಬೇಕಿದೆ. ಮಿತಿ ಮೀರಿದ ಭಾಷಾ ಅಸಮಾನೆತೆ ಕನ್ನಡಕ್ಕೆ ಕಂಟಕ ಪ್ರಾಯವಾಗಿರುವ ಈ ಹೊತ್ತಿನಲ್ಲಿ ಕನ್ನಡದ ವಾಹಿನಿಗಳು ತಮ್ಮಹೊಣೆಗಾರಿಕೆಯನ್ನು ಅರಿತು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿದೆ.

ವಲ್ಲೀಶ ಕುಮಾರ್