ಗ್ರಾಹಕರ ಭಾಷಾ ಹಕ್ಕುಗಳ ಕಾಯುವ ಕಾನೂನು ರೂಪುಗೊಳ್ಳಲಿ

ಕರ್ನಾಟಕದಲ್ಲಿ ಗ್ರಾಹಕರಿಗೆ ತಮ್ಮ ಭಾಷಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮತ್ತು ದನಿಯೆತ್ತುವ ಕೆಲಸವನ್ನು ಕನ್ನಡ ಗ್ರಾಹಕರ ಕೂಟವು ಕಳೆದ ಐದು ವರುಷಗಳಿಂದ ಮಾಡುತ್ತಲೇ ಬಂದಿದೆ. ಇದರ ಫಲವಾಗಿ ಇಂದು ಕರ್ನಾಟಕದಲ್ಲಿ ಹಲವು ಗ್ರಾಹಕರು ತಮ್ಮ ಭಾಷಾ ಹಕ್ಕುಗಳ ಕುರಿತು ಅರಿತು ಕೊಂಡಿದ್ದಾರೆ. ಸರ್ಕಾರಿ ಖಾಸಗಿ ಎನ್ನದೆ ಯಾವುದೇ ಸಂಸ್ಥೆಯಿಂದ ಸೇವೆ ಪಡೆಯುವಾಗ ತಮ್ಮ ಭಾಷೆಯಲ್ಲಿ ಗ್ರಾಹಕ ಸೇವೆ ಸಿಗದೇ ಹೋದರೆ ಗ್ರಾಹಕರಾಗಿ ತಮ್ಮ ಭಾಷಾ ಹಕ್ಕನ್ನು ಚಲಾಯಿಸಲು ತಿಳಿದಿದ್ದಾರೆ. ಮಾರ್ಚ್ ತಿಂಗಳಲ್ಲಿ ಗ್ರಾಹಕರ ಹಕ್ಕುಗಳ ದಿನದಂದು ನಡೆದ ಟ್ವಿಟರ್ ಅಭಿಯಾನದಲ್ಲಿ #ServeInMyLanguage ಅನ್ನುವ ಹ್ಯಾಷ್ ಟ್ಯಾಗನ್ನು ಬಳಸಿ ಮುನ್ನೂರಕ್ಕೂ ಹೆಚ್ಚು ಕನ್ನಡಿಗರು ಟ್ವೀಟ್ ಬರೆಯುವ ಮೂಲಕ ಕನ್ನಡದಲ್ಲೇ ಗ್ರಾಹಕ ಸೇವೆ ನೀಡುವುದರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದರು ಮತ್ತು ಕನ್ನಡ ಗ್ರಾಹಕರ ಭಾಷಾ ಹಕ್ಕುಗಳ ರಕ್ಷಣೆಗೆ ಸೂಕ್ತ ಕಾನೂನು ಇಲ್ಲದಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ದನಿಯೆತ್ತಿದರು. ಈ ಅಭಿಯಾನಕ್ಕೆ ಹೊರ ರಾಜ್ಯಗಳಿಂದಲೂ ಸ್ಪಂದನೆ ಸಿಕ್ಕಿತಲ್ಲದೇ ಈ ವಿಷಯ ಟ್ವಿಟ್ಟರಿನಲ್ಲಿ ಕೆಲ ಕಾಲ ಇಡೀ ಇಂಡಿಯಾದಲ್ಲೇ ಟ್ರೆಂಡ್ ಆಗಿದ್ದು ವಿಶೇಷ. ಭಾರತದೆಲ್ಲೆಡೆ ಗ್ರಾಹಕರು ತಮ್ಮ ತಮ್ಮ ರಾಜ್ಯ ಭಾಷೆಗಳಲ್ಲಿ ಗ್ರಾಹಕ ಸೇವೆ ಕಡ್ಡಾಯವಾಗಬೇಕೆಂಬ ಆಶಯ ವ್ಯಕ್ತಪಡಿಸಿದರು. ಈ ಟ್ವಿಟ್ಟರ್ ಅಭಿಯಾನದ ಮೂಲಕ ಗ್ರಾಹಕರ ಭಾಷಾ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ಅನೇಕ ಮಾಧ್ಯಮಗಳ ಮತ್ತು ಜನ ಪ್ರತಿನಿಧಿಗಳ ಗಮನಕ್ಕೂ ತರಲಾಯಿತು.

ಸದ್ಯದ ವ್ಯವಸ್ಥೆಯಲ್ಲಿ ಕರ್ನಾಟಕದಲ್ಲಿ ಕನ್ನಡದಲ್ಲೇ ಗ್ರಾಹಕ ಸೇವೆ ನೀಡಬೇಕೆಂಬ ಯಾವುದೇ ಕಾನೂನು ಇರುವುದಿಲ್ಲ. ಅಂದರೆ ಕರ್ನಾಟಕದಲ್ಲಿ ಗ್ರಾಹಕರ ಮಾಹಿತಿ ಹಾಗು ಸುರಕ್ಷತೆಯ ಹಕ್ಕನ್ನು ಕಾಪಾಡಲು ಯಾವುದೇ ಕಾನೂನು ಮಾರ್ಗವಿಲ್ಲ. ಗ್ರಾಹಕರಾಗಿ ನಾವು ಯಾವುದೇ ಕಂಪನಿಯನ್ನು ಕನ್ನಡದಲ್ಲೇ ಸೇವೆ ನೀಡಬೇಕೆಂದು ಕೇಳಿದಾಗ ಕಂಪನಿಯವರು ನಿರಾಕರಿಸಿದರೆ ಅಂತಹ ಕಂಪನಿಗಳ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಆಗುವುದಿಲ್ಲ. ಇಂತಹ ವ್ಯವಸ್ಥೆ ಇರುವುದರಿಂದ ಕರ್ನಾಟಕದಲ್ಲಿ ಗ್ರಾಹಕರನ್ನು ವಂಚಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ ಮತ್ತು ಗ್ರಾಹಕರ ಸುರಕ್ಷತೆಗೆ ಧಕ್ಕೆಯುಂಟಾಗುತ್ತದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲು ಕನ್ನಡ ಗ್ರಾಹಕರ ಕೂಟವು ಕರ್ನಾಟಕದ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ದಿನೇಶ್ ಗುಂಡು ರಾವ್ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಗ್ರಾಹಕರ ಭಾಷಾ ಹಕ್ಕುಗಳ ಕಾಪಾಡುವ ಕಾನೂನು ರೂಪಿಸುವಂತೆ ಕೋರಿದರು. (ಮನವಿ ಪತ್ರದ ಪ್ರತಿಯನ್ನು ಕೆಳಗೆ ನೀಡಲಾಗಿದೆ) ಮಾನ್ಯ ಸಚಿವರು ಈ ನಿಟ್ಟಿನಲ್ಲಿ ಕಾನೂನು ರೂಪಿಸುವ ಬಗ್ಗೆ ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಿದೆ ಎಂದು ಹೇಳಿದ್ದಾರೆ.

944941_1073831645989463_3428109316195843325_n 12985524_1073766815995946_750838120037377290_n

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಗ್ರಾಹಕರ ಭಾಷಾ ಹಕ್ಕುಗಳನ್ನು ಕಾಯುವ ನಿಟ್ಟಿನಲ್ಲಿ ಕಾನೂನು ರೂಪಿಸುವ ಮೂಲಕ ಕರ್ನಾಟಕ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಲಿ. ಕರ್ನಾಟಕ ಮೊದಲುಗೊಂಡು ಇಡೀ ದೇಶದಲ್ಲಿ ಎಲ್ಲಾ ಗ್ರಾಹಕರಿಗೂ ಅವರವರ ರಾಜ್ಯಗಳಲ್ಲಿ ಅವರ ಭಾಷೆಗಳಲ್ಲೇ ಗ್ರಾಹಕ ಸೇವೆ ಸಿಗುವಂತಾಗಲಿ ಎಂದು ಆಶಿಸೋಣ.

– ವಲ್ಲೀಶ ಕುಮಾರ್ ಎಸ್