ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯಲು ನೆರವಾಗುವ ಒಂದು ಫೋರಮ್

ಇವತ್ತು ವಿಶ್ವ ಗ್ರಾಹಕರ ದಿನಾಚರಣೆ. ಸಾಮಾನ್ಯವಾಗಿ ಗ್ರಾಹಕನ ಹಕ್ಕು ಎಂದಾಗ ತೂಕ, ಅಳತೆ, ಗುಣಮಟ್ಟಗಳ ಸುತ್ತ ವಿಷಯಗಳು ಚರ್ಚಿಸಲ್ಪಡುತ್ತವೆ. ಈ ವಿಷಯಗಳು ಮುಖ್ಯವಾದರೂ ಸಹ, ಈ ವಿಷಯಗಳು ಜನರಿಗೆ ಯಾವ ಭಾಷೆಯಲ್ಲಿ ತಿಳಿಸಲ್ಪಡುತ್ತವೆ ಅನ್ನುವುದು ಹೆಚ್ಚಾಗಿ ಪ್ರಸ್ತಾಪವಾಗುವುದಿಲ್ಲ. ಈ ಮಾಹಿತಿ ಇಂಗ್ಲೀಶ್ ಅಥವಾ ಹಿಂದಿ ಭಾಷೆಯಲ್ಲಿ ಇದ್ದು, ಜನರ ಭಾಷೆಯಲ್ಲಿ ಇರದೇ ಹೋದರೆ ಈ ಮಾಹಿತಿಯನ್ನು ಕೊಡುವುದರಿಂದ ಏನು ಪ್ರಯೋಜನ? ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯನ್ನು ಕೊಡಬೇಕಾದುದು ಸ್ವಾಭಾವಿಕವೂ,ಜನಪರವೂ ಹಾಗೂ ನ್ಯಾಯಸಮ್ಮತವೂ ಆಗಿದೆ. ಆದ್ದರಿಂದ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಸೇವೆ ಕೇಳಿ ಪಡೆಯುವುದು ನಮ್ಮೆಲ್ಲರ ಹಕ್ಕು.

ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ದಕ್ಕಿಸಿಕೊಳ್ಳಲು ಹಲವಾರು ಪ್ರಯತ್ನಗಳು ಈವರೆಗೂ ನಡೆದಿವೆ ಹಾಗೂ ನಡೆಯುತ್ತಿವೆ. ಗ್ರಾಹಕ ಸೇವೆಯಲ್ಲಿ ಹಾಗೂ ನಾಗರೀಕ ಸೇವೆಯಲ್ಲಿ ಕನ್ನಡದ ಬಳಕೆ ಆಗುವಂತೆ ಮಾಡಲು ನಾವು ನೀವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕನ್ನಡದಲ್ಲಿ ಸೇವೆ ಪಡೆಯಲು ಆಗುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಇಂಬು ಕೊಡುವ ಉದ್ದೇಶದಿಂದ ಕನ್ನಡ ಗ್ರಾಹಕರ ಕೂಟದ ವತಿಯಿಂದ ಒಂದು ಫೋರಮ್ ಅನ್ನು ತೆರೆಯಲಾಗಿದೆ. ಈ ಫೋರಮ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗದೆ ನಿಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಬಹುದು. ಹಾಗೆ ಅದನ್ನು ಸರಿ ಮಾಡಲು ಮಾಡಿದ ಪ್ರಯತ್ನಗಳನ್ನು ಕೂಡ ಹಂಚಿಕೊಳ್ಳಬಹುದು. ಇದರೊಟ್ಟಿಗೆ ಮಾರುಕಟ್ಟೆಯ ಮಾಹಿತಿ ಮತ್ತು ಗ್ರಾಹಕ ಸೇವೆ ಕಾನೂನಿನ ಮಾಹಿತಿಯನ್ನು ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೇ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗುವೆಡೆ ನೀವು ಪ್ರಯತ್ನಿಸಿ ಯಶಸ್ವಿಯಾದ ಸುದ್ದಿಗಳನ್ನೂ ಕೂಡ ಇಲ್ಲಿ ಹಂಚಿಕೊಳ್ಳಬಹುದು.

ಕನ್ನಡ ಗ್ರಾಹಕರ ಒಗ್ಗಟಿನ ಸೂರಾದ ಈ ಫೋರಮ್ ಗೆ ಸೇರಲು ಈ ಕೊಂಡಿಯನ್ನು ಕ್ಲಿಕ್ಕಿಸಿ. ನಿಮ್ಮ ಗೆಳೆಯರಿಗೂ ಇದರ ಬಗ್ಗೆ ತಿಳಿಸಿ.